
ಇಂದು ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ನಡೆಯುತ್ತಿದೆ. 3 ಏಕದಿನ ಸರಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸುವ ಇರಾದೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಆದರೆ, ಈ ಪಂದ್ಯಕ್ಕೆ ಮಳೆ ಕಾಟ ನೀಡದಿದ್ದರೆ ಮಾತ್ರ ಈ ಪಂದ್ಯದ ಫಲಿತಾಂಶ ಹೊರಬೀಳಲಿದೆ. ನಿಗಧಿತ ಸಮಯಕ್ಕೂ ಕೊಂಚ ತಡವಾಗಿ ಟಾಸ್ ನಡೆದಿದ್ದು, ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಎಂದಿನಂತೆ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಟೀಂ ಇಂಡಿಯಾ ನಾಯಕ ಧವನ್ ಈ ಸರಣಿಯ 3 ಪಂದ್ಯಗಳ ಟಾಸ್ ಸೋತಿರುವುದು ಇಲ್ಲಿ ವಿಶೇಷ. ಟಾಸ್ ಬಳಿಕ ಉಭಯ ತಂಡಗಳು ತಮ್ಮ ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡದೆ ಎರಡನೇ ಏಕದಿನ ಪಂದ್ಯಕ್ಕೆ ಕಣಕ್ಕಿಳಿಸಿದ ತಂಡವನ್ನೇ ಇಂದು ಕೂಡ ಆಡಿಸುತ್ತಿದೆ. ಆದರೆ ಕಿವೀಸ್ ಪಡೆ ಮಾತ್ರ ಒಂದು ಬದಲಾವಣೆ ಮಾಡಿದೆ.
ಆದಾಗ್ಯೂ, ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತಕ್ಕೆ ಗೆಲುವು ಸುಲಭವಲ್ಲ ಏಕೆಂದರೆ ಈ ಮೈದಾನದಲ್ಲಿ ಭಾರತದ ಏಕದಿನ ಮಾದರಿಯ ದಾಖಲೆ ಉತ್ತಮವಾಗಿಲ್ಲ. ಇಲ್ಲಿ ಆಡಿದ 6 ಪಂದ್ಯಗಳಲ್ಲಿ ಭಾರತ ತಂಡ ಗೆದ್ದಿರುವುದು ಒಂದರಲ್ಲಿ ಮಾತ್ರ. ಇದಲ್ಲದೇ ಕಿವೀಸ್ ತಂಡ ಈ ಹಿಂದೆ ತವರಿನಲ್ಲಿ 13 ಏಕದಿನ ಪಂದ್ಯಗಳನ್ನು ಸೋತಿದೆ. ಆದರೆ ಭಾರತ ತಂಡವು ತವರು ತಂಡದ ವಿರುದ್ಧ ಕಳೆದ 5 ಏಕದಿನ ಪಂದ್ಯಗಳಲ್ಲಿ 4 ರಲ್ಲಿ ಸೋತಿದೆ. ಸರಣಿಯನ್ನು ಸಮಬಲಗೊಳಿಸಲು ಭಾರತ ಇಂದು ಯಾವುದೇ ಬೆಲೆ ತೆತ್ತಾದರೂ ಪಂದ್ಯ ಗೆಲ್ಲಬೇಕಿದೆ.
ಎರಡೂ ತಂಡಗಳು ಹೀಗಿವೆ
ಭಾರತದ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್
source https://tv9kannada.com/sports/cricket-news/india-vs-new-zealand-3rd-odi-christchurch-playing-xi-toss-update-in-kannada-psr-au14-478293.html
Comments
Post a Comment