ಆಗ್ರಾ: ಮನೆಯಲ್ಲಿ ಚಿಕ್ಕ ಮಕ್ಕಳನ್ನು ಜೋಪಾನ ಮಾಡುವುದು ದೊಡ್ಡ ಸವಾಲಿನ ಕೆಲಸವೇ. ಅವರು ಯಾವಾಗ
ಏನು ಮಾಡುತ್ತಾರೆ ಎನ್ನುವುದನ್ನು ತಿಳಿಯುವುದೇ ಕಷ್ಟ. ಅಂಥದ್ದೇ ಒಂದು ಭಯಾನಕ ಘಟನೆ ಆಗ್ರಾದಲ್ಲಿ
ನಡೆದಿದೆ. ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ತನ್ನ ತಲೆಯನ್ನು ಪ್ರೆಷರ್ ಕುಕ್ಕರ್
ಒಳಗೆ ಸಿಲುಕಿಸಿಕೊಂಡಿದೆ.
ಲೋಹಮಂಡಿಯಲ್ಲಿರುವ ಖಾಟಿಪುರದ ಬಳಿ ಈ ಘಟನೆ ನಡೆದಿದೆ. ಮನೆಯವರು
ಕುಕ್ಕರ್ ಅನ್ನು ಕೆಳಗಡೆ ಇಟ್ಟಿದ್ದರು. ಈ ಸಂದರ್ಭದಲ್ಲಿ ಮಗು ಆಟವಾಡುತ್ತಾ ಅದನ್ನು
ಎತ್ತಿಕೊಂಡು ತಲೆಯೊಳಕ್ಕೆ ಸಿಕ್ಕಿಸಿಕೊಂಡಿದೆ. ಕುಕ್ಕರ್ ಚಿಕ್ಕದು ಇದ್ದುದರಿಂದ ಅದನ್ನು
ತೆಗೆಯಲು ಸಾಧ್ಯವೇ ಆಗಲಿಲ್ಲ.
ಸ್ವಲ್ಪ ಹೆಚ್ಚೂ ಕಡಿಮೆಯಾಗಿದ್ದರೂ ಮಗುವಿನ ಜೀವಕ್ಕೆ ಅಪಾಯವಿತ್ತು.
ಉಸಿರುಕಟ್ಟುವ ಸಾಧ್ಯತೆ ಇತ್ತು. ಕೂಡಲೇ ಮನೆಯವರು ಎಚ್ಚೆತ್ತುಕೊಂಡು ವೈದ್ಯರಿಗೆ ಕರೆ
ಮಾಡಿದ್ದಾರೆ. ಆಗ ಗ್ರೈಂಡರ್ ಯಂತ್ರದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ವೈದ್ಯರ ತಂಡ ಮಗುವಿನ ತಲೆಗೆ
ಯಾವುದೇ ರೀತಿಯ ತೊಂದರೆಯಾಗದಂತೆ ಸತತ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಯಂತ್ರದಿಂದ ಕುಕ್ಕರ್
ಅನ್ನು ಕಟ್ ಮಾಡಿದೆ. ಅದೃಷ್ಟವಶಾತ್ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಾಗಲಿಲ್ಲ.
ಮಕ್ಕಳು ಮನೆಯಲ್ಲಿ ಇದ್ದರೆ ಇಂಥ ಚಿಕ್ಕಚಿಕ್ಕ ವಿಷಯಗಳಿಗೂ
ಗಮನಕೊಡಿ. ಇಲ್ಲದೇ ಹೋದರೆ ಮಗುವಿನ ಪ್ರಾಣವೇ ಹೋಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
Comments
Post a Comment