Tuesday 31 August 2021

ನಾಳೆ ರಾಜ್ಯಾದ್ಯಂತ ' ವಿಶೇಷ ಕೊರೋನಾ ಲಸಿಕಾ ಉತ್ಸವ' : ಎಲ್ಲರಿಗೂ ಸಿಗಲಿದೆ ಲಸಿಕೆ.!

 

ಬೆಂಗಳೂರು : ರಾಜ್ಯದಲ್ಲಿ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ( Special Corona Vaccine Utsav ) ನಡೆಸಲಾಗುತ್ತದೆ. ಈ ಮೂಲಕ 10 ಲಕ್ಷ ಕೊರೋನಾ ಲಸಿಕೆಯನ್ನು ( Corona Vaccine ) ನೀಡುವ ಗುರಿಯನ್ನು ಹೊಂದಲಾಗಿದೆ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು. ಇದರಂತೆಯೇ ನಾಳೆ ರಾಜ್ಯಾದ್ಯಂತ ವಿಶೇಷ ಲಸಿಕಾ ಉತ್ಸವ ನಡೆಯಲಿದೆ. ಇಂತಹ ಲಸಿಕಾ ಉತ್ಸವದಲ್ಲಿ 2ನೇ ಡೋಸ್ ಪಡೆದವರಿಗೆ, 18 ವರ್ಷ ಮೇಲ್ಪಟ್ಟವರಿಗೂ ಮೊದಲ ಡೋಸ್ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ( Covishield and Covaxin ) ಲಭ್ಯವಾಗಲಿದೆ.

ಹೌದು.. ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು. ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು. ವಾರದಲ್ಲಿ ಒಂದು ದಿನ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬ ಗುರಿ ಇದೆ ಎಂದಿದ್ದರು.

ಇಡೀ ರಾಜ್ಯದಲ್ಲಿ 4 ಕೋಟಿ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೊಳೆಗೇರಿ ನಿವಾಸಿಗಳಿಗೆ ಪ್ರತಿ ದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರು ವಾಸ ಮಾಡುವ ಸ್ಥಳದಲ್ಲೇ ಸಿಬ್ಬಂದಿ ನಿಯೋಜಿಸಿ ಅಲ್ಲೇ ಲಸಿಕೆ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ. ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಎರಡೂ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದಿದ್ದರು.

ಈ ಹಿನ್ನಲೆಯಲ್ಲಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಲಯಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚಿನ ತಂಡಗಳನ್ನು ರಚಿಸಿಕೊಂಡು, ಕೋವಿಡ್ -19 ಲಸಿಕಾಕರಣವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಮುಂದಿನ ದಿನಗಳಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಸಾರ್ವಜನಿಕರಿಗೆ ಕಡ್ಡಾಯವಾಗಿ ಕನಿಷ್ಠ ಒಂದು ಡೋಸ್ ಕೋವಿಡ್ -19 ಲಸಿಕೆ ನೀಡುವ ಗುರಿ ಹೊಂದಿದ್ದು , ಸದರಿ ಗುರಿಯನ್ನು ಯಶಸ್ವಿಯಾಗಿ ತಲುಪಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ.

1. ಪಾಲಿಕೆಯ ಲಸಿಕಾಕರಣದ ಗುರಿಯನ್ನು ಪ್ರತೀ ದಿನಕ್ಕೆ ಒಂದು ಲಕ್ಷ ಪರಿಷ್ಕರಿಸಲಾಗಿದ್ದು, ಎಲ್ಲಾ ವಲಯಗಳಿಗೆ ಒಂದು ಲಕ್ಷದ ಗುರಿ ಹಾಗೂ ಬೇಡಿಕೆಗನುಗುಣವಾಗಿ ಹಂಚಿಕೆ ಮಾಡಲಾಗುವುದು.

2. ನಗರ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ ಗುರುತಿಸಿರುವ ಸ್ಥಿರ ಲಸಿಕಾ ಕೇಂದ್ರಗಳನ್ನು ದಿನಾಂಕ: 01-09-2021 ರಿಂದ ಅನ್ವಯವಾಗುವಂತೆ ಬೆಳಗ್ಗೆ 8.00 ರಿಂದ ಮಧ್ಯಾಹ್ನ 2.30 ರವರೆಗೆ ಕಾರ್ಯ ನಿರ್ವಹಿಸುವುದು. ಒಂದು ವೇಳೆ ಮಧ್ಯಾಹ್ನ 2.30 ರ ನಂತರವೂ ಸಾರ್ವಜನಿಕರು ಸರತಿ ಸಾಲಿನಲ್ಲಿ ಕಾಯುತ್ತಿದ್ದರೆ ಲಸಿಕಾರಣದ ಅವಧಿಯನ್ನು ಮುಂದುವರೆಸುವುದು.

3. ಒಂದು ವೇಳೆ ನಗರ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕಾ ದಾಸ್ತಾನು 2.30 ಗಂಟೆಯೊಳಗೆ ಖಾಲಿಯಾಗಿದ್ದಲ್ಲಿ ನಿಗಧಿತ ತಂಡಗಳು ಸಾರ್ವಜನಿಕರಿಗೆ ಮರು ದಿನದ ಲಸಿಕೆಗಾಗಿ ಟೋಕನ್‌ನ್ನು ನೀಡುವುದು.

4. ಪ್ರತೀ ವಿಧಾನಸಭಾ ಕ್ಷೇತ್ರವಾರು ಗುರುತಿಸಿರುವ 2 ಲಸಿಕಾ ಕೇಂದ್ರಗಳಲ್ಲಿ ಪ್ರತೀ ದಿನ ಬೆಳಗ್ಗೆ 8.00 ರಿಂದ ರಾತ್ರಿ 9.00 ಗಂಟೆಯವರೆಗೆ ಕಾರ್ಯ ನಿರ್ವಹಿಸುವಂತೆ ಕ್ರಮವಹಿಸುವುದು.

5. ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಬೃಹತ್ ಲಸಿಕಾ ಶಿಬಿರವನ್ನು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 3 ಕೇಂದ್ರಗಳಲ್ಲಿ ಬೆಳಗ್ಗೆ 8.00 ರಿಂದ ರಾತ್ರಿ 9.00 ಗಂಟೆಯವರೆಗೆ ಲಸಿಕೆ ನೀಡಲಾಗುವುದು. ಅವಶ್ಯವಿದ್ದಲ್ಲಿ ಸಮಯವನ್ನು ವಿಸ್ತರಿಸಲಾಗುವುದು.

6. ಎಲ್ಲಾ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಕೊಳಗೇರಿ ನಿವಾಸಿಗಳು/ಕಡಿಮೆ ಆದಾಯ ಗುಂಪುಗಳು ಹಾಗೂ ಲಸಿಕಾಕರಣ ವಂಚಿತ ಪ್ರದೇಶದಲ್ಲಿ ವಿಶೇಷ ಕ್ಯಾಂಪ್‌ಗಳನ್ನು(ಮನೆಯ ಹತ್ತಿರ) ಎಲ್ಲಾ ಲಸಿಕೆಯನ್ನು ಅವಶ್ಯಕತೆಗನುಗುಣವಾಗಿ ಸಮಯವನ್ನು ನಿಗಧಿಪಡಿಸಿಕೊಳ್ಳಲು ಕ್ರಮವಹಿಸುವುದು.

7. ಹಿರಿಯ ನಾಗರೀಕರಿಗೆ, ಮನೆಯಲ್ಲಿ ಹಾಸಿಗೆ ಹಿಡಿದ ರೋಗಿಗಳಿಗೆ, ಎಇಎಫ್‌ಐ ಪ್ರಕರಣಗಳಿಗೆ ಸಮರ್ಪಕ ವೈದ್ಯಕೀಯ ಸೇವೆಗಳೊಂದಿಗೆ ವಿಶೇಷ ಲಸಿಕಾಕರಣದ(ಮನೆಯ ಹತ್ತಿರ) ಸೌಲಭ್ಯವನ್ನು ಒದಗಿಸಲು ಕ್ರಮವಹಿಸುವುದು.

8. ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಮಾರುಕಟ್ಟೆಗಳು, ಸರ್ಕಾರಿ ಕಛೇರಿಗಳು, ಟೆಕ್ ‌ಪಾರ್ಕ್‌ಗಳು ಇತ್ಯಾದಿ ಸ್ಥಳಗಳಲ್ಲಿ ಪ್ರಮುಖ ಮೊಬೈಲ್ ಲಸಿಕಾ ಕೇಂದ್ರಗಳ ಮುಖಾಂತರ ಸಾರ್ವಜನಿಕರಿಗೆ ಲಸಿಕೆ ನೀಡಲು ಕ್ರಮವಹಿಸುವುದು (ಗುರುತಿಸಲಾದ ಮೊಬೈಲ್ ಲಸಿಕಾ ಕೇಂದ್ರಗಳಿಗೆ ಹೆಚ್ಚುವರಿ ಲಸಿಕೆಗಳನ್ನು ಹಂಚಿಕೆ ಮಾಡಲಾಗುವುದು).

9. ವಾರದಲ್ಲಿ ಒಂದು ದಿನ ಲಸಿಕಾ ಮೇಳ ದಿನವೆಂದು ನಿಯೋಜಿಸಿ, ಸದರಿ ಮೇಳದಲ್ಲಿ ಕನಿಷ್ಠ 1.5 ರಿಂದ 2 ಲಕ್ಷ ಲಸಿಕಾಕರಣ ಗುರಿ ಸಾಧಿಸುವಂತೆ ಕ್ರಮವಹಿಸುವುದು.

10. ಲಸಿಕಾ ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕೋವಿಡ್ -19 ರೋಗಲಕ್ಷಣಗಳು ಕಂಡು ಬಂದಲ್ಲಿ ಮಾತ್ರ ಕೋವಿಡ್ -19 ಪರೀಕ್ಷೆಗೆ ಒಳಪಡಿಸುವುದು. ಉಳಿದಂತೆ ಯಾವುದೇ ಕಾರಣಕ್ಕೂ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸುವಂತಿಲ್ಲ.

ವಲಯ ಜಂಟಿ ಆಯುಕ್ತರು/ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕಾಕರಣವನ್ನು ತೀವ್ರಗೊಳಿಸಲು ಅವಶ್ಯಕತೆಗನುಗುಣವಾಗಿ ಹೆಚ್ಚಿನ ತಂಡಗಳನ್ನು ರಚಿಸಿಕೊಂಡು ಮೇಲಿನ ಅಂಶಗಳನ್ವಯ ನಿಗಧಿಪಡಿಸಿರುವ ಲಸಿಕಾಕರಣದ ಗುರಿಗಳನ್ನು ಕಡ್ಡಾಯವಾಗಿ ಸಾಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದೇ ರೀತಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ನಾಳೆ ವಿಶೇಷ ಲಸಿಕಾ ಉತ್ಸವ ನಡೆಯಲಿದೆ. 2ನೇ ಡೋಸ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ, ಮೊದಲ ಡೋಸ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದೆ. ಹೀಗಾಗಿ ತಪ್ಪದೇ ನಿಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆಯ ಪರವಾಗಿ ನಿಮ್ಮಲ್ಲಿ  ಸಮಗ್ರ ಸಿದ್ಧಿ ಕೂಡ ಮನವಿ ಮಾಡುತ್ತದೆ.

No comments:

Post a Comment