Monday 30 August 2021

ಕರ್ನಾಟಕ: 2 ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಪ್ರತಿಕಾಯ ಪರೀಕ್ಷೆ

 

ಬೆಂಗಳೂರು, ಆಗಸ್ಟ್ 30: ಎರಡು ಕೊರೊನಾ ಲಸಿಕೆ ಪಡೆದ ಕಾರ್ಯಕರ್ತರಿಗೆ ಪ್ರತಿಕಾಯಗಳ ಪರೀಕ್ಷೆ ನಡೆಸಲಾಗುತ್ತಿದೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕೋವಿಡ್-19 ಪ್ರತಿಕಾಯಗಳ ಪರೀಕ್ಷೆ ನಡೆಸುತ್ತಿದೆ. ಆರೋಗ್ಯ ಕಾರ್ಯಕರ್ತರು ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದು 6 ತಿಂಗಳು ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ಪ್ರತಿಕಾಯಗಳ ಕುಸಿತ ಉಂಟಾಗಿದೆಯೇಉಂಟಾಗಿದ್ದರೆ ಮತ್ತೊಂದು ಡೋಸ್ ಲಸಿಕೆ ಅಗತ್ಯವಿದೆಯೇ ಎಂಬುದನ್ನು ಅರಿಯಲು ಈ ಪರೀಕ್ಷೆ ನಡೆಸಲಾಗುತ್ತಿದೆ.

ಕೊರೊನಾ ಲಸಿಕೆಯ ನಡುವಿನ ಅಂತರವನ್ನು 12-16 ರಿಂದ 6-8 ವಾರಗಳಿಗೆ ಇಳಿಕೆ ಮಾಡಬೇಕೆಂದು, ಇಲ್ಲದೇ ಇದ್ದಲ್ಲಿ ಮೊದಲ ಡೋಸ್ ಗಳ ಲಸಿಕೆ ಪಡೆದ ನಂತರ ಸೋಂಕು ಎದುರಾದಲ್ಲಿ ಅದರ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಎರಡನೇ ಡೋಸ್ ಲಸಿಕೆಯಿಂದ ಉತ್ತಮ ಪ್ರತಿಕಾಯಗಳು ಉತ್ಪಾದನೆಯಾಗುತ್ತದೆ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕಾಯಗಳ ಪರೀಕ್ಷೆ ನಡೆಸುವ ಬಗ್ಗೆ ಹಾಗೂ ಹೆಚ್ಚುವರಿ ಡೋಸ್ ನೀಡುವ ಬಗ್ಗೆ ವೈದ್ಯಕೀಯ ಸಮೂಹದಲ್ಲೇ ಭಿನ್ನಾಭಿಪ್ರಾಯಗಳಿವೆ ಎಂದು ಲಸಿಕೆ ನೀಡುವುದಕ್ಕಾಗಿ ಇರುವ ಎನ್ ಟಿಎಜಿ ಡಾ.ಜಯಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ.

ಫೆಬ್ರವರಿ ತಿಂಗಳ ವೇಳೆಗೆ ಈ ಆರೋಗ್ಯ ಕಾರ್ಯಕರ್ತರಿಗೆ ಎರಡೂ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಪ್ರತಿಕಾಯಗಳಿಗಾಗಿ ಪರೀಕ್ಷೆ ನಡೆಸಿದ್ದಾಗ ಉತ್ತಮ ಫಲಿತಾಂಶ ಬಂದಿತ್ತು.

ಡಾ. ಸಿ.ಎನ್ ಮಂಜುನಾಥ್ ಮಾತನಾಡಿ, ಈಗ ಪರೀಕ್ಷೆಗೊಳಪಡುವ ಆರೋಗ್ಯ ಕಾರ್ಯಕರ್ತರನ್ನು ಸೆಪ್ಟೆಂಬರ್ ನಲ್ಲಿಯೂ ಪರೀಕ್ಷೆಗೊಳಪಡಿಸಲಾಗುತ್ತದೆ. ಏಪ್ರಿಲ್ ನಲ್ಲಿ ಪರೀಕ್ಷೆಗೊಳಪಡಿಸಿದಾಗ ಶೇ.80 ರಷ್ಟು ಮಂದಗೆ ಉತ್ತಮ ಪ್ರತಿಕಾಯಗಳಿತ್ತು. ಮರು ಪರೀಕ್ಷೆ ನಡೆಸುವ ವೇಳೆಗೆ ಎರಡೂ ಡೋಸ್ ಗಳನ್ನು ಪಡೆದು 6 ತಿಂಗಳು ಕಳೆದಿರುತ್ತದೆ.

ಒಂದು ವೇಳೆ ಪ್ರತಿಕಾಯಗಳು ಕಡಿಮೆಯಾದಲ್ಲಿ ಆಸ್ಪತ್ರೆಗಳಲ್ಲಿರುವ ಮುನ್ನೆಲೆ ಕಾರ್ಯಕರ್ತರಿಗೆ ಹೆಚ್ಚುವರಿ ಡೋಸ್ ಗಳನ್ನು ನೀಡುವ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪ್ರತಿಯೊಬ್ಬರಿಗೂ ಹೆಚ್ಚುವರಿ ಡೋಸ್ ನೀಡಲು ಸಾಧ್ಯವಿಲ್ಲ. ಈಗ ಲಸಿಕೆ ಪೂರೈಕೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ನಮ್ಮ ಸ್ವಂತ ಡೇಟಾವನ್ನು ಹೊಂದಿರಬೇಕೆಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.70ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.34ರಷ್ಟಿದೆ.

ರಾಜ್ಯದಲ್ಲಿ ಒಂದು ದಿನದಲ್ಲಿ 1262 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1384 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 17 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 37278 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2947255ಕ್ಕೆ ಏರಿಕೆಯಾಗಿದೆ. ಒಟ್ಟು 2891193 ಸೋಂಕಿತರು ಗುಣಮುಖರಾಗಿದ್ದು. 18758 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರವೊಂದರಲ್ಲಿ ಕಳೆದ ಒಂದು ದಿನದಲ್ಲಿ 361 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1237286ಕ್ಕೆ ಏರಿಕೆಯಾಗಿದೆ. ಆರು ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15983ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 7343 ಸಕ್ರಿಯ ಪ್ರಕರಣಗಳಿವೆ.

 

No comments:

Post a Comment