Sunday 25 July 2021

ಎಂದೂ ತೀರದ ಸಾಲ.

 ವೀಕೆಂಡ್ ಸ್ಪೆಷಲ್: ಈ ವಾರದ ಸಂಡೇ ಸ್ಪೆಷಲ್ ನಲ್ಲಿ ಸತ್ಯಂ ಶಂಕರಮಂಚಿ ಅವರ ತೆಲುಗು ಕಥಾಸಂಕಲನ  ಅಮರಾವತಿ ಕಥೆಗಳು” ಕನ್ನಡಕ್ಕೆ ಡಾ|| ವಿರೂಪಾಕ್ಷಿ ಎನ್ ಬೋಸಯ್ಯ ಅನುವಾದಿಸಿದ್ದಾರೆ.  ಅಮರಾವತಿ ಕಥೆಗಳು ಶಂಕರಮಂಚಿ ಅವರ ಕಥಾಸಂಕಲನ. ಇದರಲ್ಲಿರುವ 100 ಕಥೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಥಾವಸ್ತು ವೈವಧ್ಯವಾಗಿದೆ. ಅಮರಾವತಿ ಪರಿಸರದ ಜನರ ಜೀವನ-ವಿಧಾನ ನೋವು-ನಲಿವುಗಳನ್ನು ಲೇಖಕರು ಸರಳವಾದ ಗ್ರಾಮೀಣ ಭಾಷಾ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ಕಥಾಸಂಕಲನಕ್ಕೆ  ಆಂಧ್ರಪ್ರದೇಶ ಸರ್ಕಾರವು 1979ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

(ಕಥೆ-5 )

'ಎಂದೂ ತೀರದ ಸಾಲ'

ಕಥಾ ವಸ್ತು:ಸಣ್ಣ ಹಿಡುವಳಿದಾರನಾದ ರಂಗಯ್ಯನ ತಂದೆ ಊರ ಸಾಹುಕಾರ ಶಾನುಬೋಗನ ಹತ್ತಿರ ಮಾಡಿದ ಸಾಲವನ್ನು ಅಪ್ಪ ಇದ್ದ ಕಾಲದಿಂದಲೂ, ವರ್ಷದಲ್ಲಿ ಬೆಳೆಯ ಮುಕ್ಕಾಲು ಪಾಲು ಕೊಡುತ್ತ ಬರುತ್ತಿದ್ದರೂ, ಇಂದಿಗೂ ಆ ಸಾಲ ತೀರಿಲ್ಲ. ಸಾಲ ವಸೂಲಾತಿಯೆಂದು ಶಾನುಬೋಗ ರಂಗಯ್ಯನ ಎತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾನೆ. ಇದರಿಂದ ಕುಪಿತನಾದ ರಂಗಯ್ಯನ ಒಡಲ ಕಿಚ್ಚನ್ನು ಸೊಗಸಾಗಿ ಕಥೆ ಕಟ್ಟಿಕೊಟ್ಟಿದೆ. ಮುಂದುವರೆದು ಬಡವನೊಬ್ಬ ಕೊಟ್ಟ ಮಾತು ತಪ್ಪದೆ ನಡೆಯುವನೆಂಬ ಸಂದೇಶವನ್ನು ಈ ಕಥೆ ಅಭಿವ್ಯಕ್ತಿಸುತ್ತದೆ.

ಆರ್ಟ್ : ಯೋಗೀಶ್ಮುದ್ದಾಪುರ

ರಂಗಯ್ಯ ಉದ್ದ ಕೋಲನ್ನು ಗಡ್ಡಕ್ಕೆ ಅನಿಸಿಕೊಂಡು ಶಾನುಬೋಗನ ಮನೆಯ ಮುಂಬಾಗಿಲಿಗೆ ಅಡ್ಡವಾಗಿ ನಿಂತು ಹೆಡೆ ಎತ್ತಿದ ನಾಗರಹಾವಿನಂತೆ ಬುಸುಗುಡುತ್ತಾ, ಶಾನುಬೋಗ್ರೇ? ಎಂದು ಆಕ್ರೋಶವಾಗಿ ಕೂಗಿದನು. ಅದು ಸಿಡಿಲಬ್ಬರದ ಕೂಗು. ರಂಗಯ್ಯನ ಆ ಕೂಗಿಗೆ ಶಾನಭೋಗರ ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಕೋಲಿಗೆ ಆನಿಕೊಂಡು ನಿಂತಿದ್ದ ರಂಗಯ್ಯನ ಸಿಟ್ಟು ಮತ್ತಷ್ಟು ಹೆಚ್ಚಾಗಿ ಮನೆಯೊಳಕ್ಕೆ ಇಣುಕಿ  ನೋಡುತ್ತಾ, ಶಾನಭೋಗ್ರೇ? ಎಂದು ಮತ್ತೊಮ್ಮೆ ಕೂಗಿದನು. ಅದು ಕೂಡ ಗುಡುಗು ಸಿಡಿಲಿನಂಥ, ಗೂಳಿಯ ಗುಟುರುನಂಥ ಕೂಗು. ಈ ಕೂಗು ಕೇಳಿ ಬೆಚ್ಚಿಬಿದ್ದ ಶಾನುಭೋಗ ಕಿಟಕಿಯಿಂದ ಇಣುಕಿ ನೋಡಿದ. 

ಮನೆಯ ಮುಂಬಾಗಿಲಲ್ಲಿ ಏಳು ತಲೆಯ ಸರ್ಪದಂತೆ ಬುಸುಗುಡುತ್ತ ನಿಂತಿದ್ದ ರಂಗಯ್ಯನ ಕಣ್ಣುಗಳಲ್ಲಿ ಉಕ್ಕಿಬರುತ್ತಿದ್ದ ಕೋಪವನ್ನು ನೋಡಿದ ಶಾನಭೋಗನ ಹೃದಯ ಭಯದಿಂದ ಬಡಿದುಕೊಳ್ಳಲಾರಂಬಿಸಿತು. ತನ್ನ ಮಗಳನ್ನು ಕರೆದು 'ನಮ್ಮಪ್ಪ ಸ್ನಾನ ಮಾಡುತ್ತಿದ್ದಾರೆ' ಬರುವವರೆಗೂ ಮುಂದಿನ ಜಗಲಿ ಮೇಲೆ ಕುಳಿತುಕೊಳ್ಳಲು ತಿಳಿಸೆಂದು ಹೇಳಿ ಕಳಿಸಿದನು. ಶಾನುಭೋಗನ ಮಗಳು ಬಂದು 'ಅಪ್ಪಯ್ಯ ಸ್ನಾನ ಮಾಡಿ ಬರುತ್ತಾರೆ, ಜಗಲಿ ಮೇಲೆ ಕೂತಿರಿ' ಎಂದು ಹೇಳಿದರೂ ರಂಗಯ್ಯ ಜಪ್ಪಯ್ಯ ಅನ್ನದೆ ಮುಂಬಾಗಿಲಲ್ಲಿಯೇ ನಿಂತನು. ಶಾನುಭೋಗ ಆಗಲೇ ಸ್ನಾನ ಮಾಡಿದ್ದನಾದರೂ, ರಂಗಯ್ಯನ  ಕಣ್ಣುಗಳಿಂದ ಹೊರಸೂಸುವ ಬೆಂಕಿ ಕಿಡಿಯಂಥ ಕೋಪಕ್ಕೆ ಮತ್ತೊಮ್ಮೆ ಅವನ ಮೈಯ್ಯೆಲ್ಲಾ ತೊಯ್ದು ಒದ್ದೆಯ ಮುದ್ದೆಯಾಗಿತ್ತು.

ರಂಗಯ್ಯನ ಎದುರಿಗೆ ಬರಲು ಶಾನುಭೋಗನ ಕಾಲುಗಳು ನಡುಗುತ್ತಿವೆ. ಅರ್ಧಗಂಟೆಯಾಯಿತು! ಮುಂಬಾಗಿಲಲ್ಲಿ ನಿಂತಿದ್ದ ರಂಗಯ್ಯನ ಕಣ್ಣೋಟ ಅತ್ತಿತ್ತ ಕದಲುತ್ತಿಲ್ಲ. ಅದೇ ಕೋಪ! ಅದೇ ದ್ವೇಷ! ರಂಗಯ್ಯನ  ಆ ತೀಕ್ಣವಾದ ಕಣ್ಣೋಟ ಬಾಣಗಳು ಬಿಟ್ಟಂತೆ ಶಾನಭೋಗನ ಎದೆಗೆ ಚುಚ್ಚುತ್ತಿದೆ; ಹಾಗೆಯೇ ಶಾನುಬೋಗನ ಕೆಡವಿಕೊಂಡು ತುಳಿದುಕೊಲ್ಲಲು ಹವಣಿಸುತ್ತಿವೆ.

'ಏನಯ್ಯ ಶಾನುಬೋಗ! ನನ್ನ,  ಕುಟುಂಬಾನ ನಾಶ ಮಾಡಿದ್ದು ಸಾಲ್ದೆ! ನನ್ನ ಕೈಗಳನ್ನ  ಮುರಿಯುತ್ತಿಯಾ? ನಾನೇನು ತಪ್ಪು ಮಾಡ್ದೇನಯ್ಯ! ಭೂತಾಯಿನಾ  ನಂಬಿಕಂಡು ಬದುಕ್ತಿರೋ ನನಗೆ ಉಸಿರಾಗಿರುವ ಎತ್ತುಗಳನ್ನು ಸಾಲಕ್ಕೆ ಜಪ್ತಿ ಮಾಡಿ, ನನ್ನ ದುಡಿಯುವ ಕೈಗಳನ್ನು ಕತ್ತರಿಸುತ್ತೀಯಾ? ಏಯ್! ಶಾನಭೋಗ್ರೇ ಯಾವತ್ತಿನ ಸಾಲ ಅದು; ನನ್ನಯ್ಯ ಮಾಡಿದ ಸಾಲ ಅಲ್ಲವೇ. 

ನನ್ನಯ್ಯನಿಗೆ ಕೊಟ್ಟಮಾತಿನಂತೆ ಪ್ರತಿವರ್ಷನೂ ನಾನು ಬೆಳೆದಿದ್ರಲ್ಲಿ ಮುಕ್ಕಾಲು ಪಾಲು ಕಾಳು ಕಣದಿಂದ ನೇರವಾಗಿ  ತಂದು ನಿನ್ನ ಮನೆಗೆ ಹಾಕುತ್ತೀನಿ. ಉಳಿದಿದ್ರಲ್ಲಿ ನಾನು ನನ್ಮಕ್ಳು ತಿನ್ನಲು ಉಳಿದಿದ್ರೂ, ನಾವು ಗಂಜಿ-ನೀರು ಕುಡಿದು ಬದುಕ್ತಿದ್ರು ಕೂಡ ನಿನಗೆ ಸಾಲ ಕೊಡದನ್ನ ನಿಲ್ಲಿಸಿದ್ದೇನಾ? ನಿಂಗೆ ಎಂದಾದ್ರೂ ನಮ್ಮೇಲೆ ಕರುಣೆ ಬಂದು 'ಅಯ್ಯೋ ಪಾಪ' ಅನಿಸಿದೆಯಾ? ನಿನ್ನತ್ರ ಮಾಡಿದ  ನನ್ನಯ್ಯನ ಸಾಲ, ನನ್ನ ಬದುಕನ್ನ ನುಂಗಿ ಹಾಕಿದೆಯಲ್ಲ! ಆದ್ರೂ ನಾನೆಂದಾದ್ರೂ ನಿನ್ನೆದುರು ಮಾತಾಡಿದೆನಾ? ನನ್ನ ಹೆಂಡತಿಗೆ ಬಂಗಾರ ಮಾಡಿಸಿದ್ದು ಒಂದ್ಕಡೆ ಇರಲಿ, ಹಬ್ಬಕ್ಕೆ ಅವಳಿಗೊಂದು ಸೀರೆನಾದ್ರು ಕೊಡಿಸಿಲ್ಲ ಗೊತ್ತಾ? ತವರುನವ್ರು  ಅವ್ಳಿಗೆ ಮಾಡ್ಸಿಕೊಟ್ಟಿದ್ದ ಬಂಗಾರದ 'ಸರ'ನ ಕೂಡ, ನೀನು ನೋಡಿದ ದಿನವೇ ಸಾಲಕ್ಕೆ ಜಮಾ ಮಾಡಿಕೊಂಡೆಯಲ್ಲ! ಆಗಲೂ ನಿನ್ನ ಸಾಲ ತೀರಲಿಲ್ಲವೆ? ಹಬ್ಬಕ್ಕೆಂದು ಮನೆಗೆ ಅಳಿಯ ಮಗಳು ಬಂದಾಗ ಒಂದು ಸೇರು ಕಾಳು ನಮಗೆ ಉಳಿಸದೇ ತೆಗ್ದುಕೊಂಡು ಹೋದಿಯಲ್ಲ! ಅಷ್ಟಾದ್ರೂ ನಿನ್ನ ಸಾಲ ತೀರಲಿಲ್ಲವೆ? ಅಷ್ಟೆಲ್ಲ ಆದ್ರು ನಾನು 'ನನ್ನ ಬದುಕಿನ ಕರ್ಮವೇ ಇಷ್ಟೆಂದು? ದೇವರನ್ನು ಶಪಿಸಿದ್ನೇ ಹೊರ್ತು, ನಿನ್ನ ತಪ್ಪೆಂದು ಎಂದಾದರೂ ಅಂದೇನಾ? ಆದ್ರೇ ನೀನು ಇವತ್ತು  ಸಾಲನೆಲ್ಲಾ ತೀರ್ಸು ಅಂತ ನನ್ನ ಬದುಕಿನ ಉಸಿರಾಗಿರುವ ಎತ್ತುಗಳ್ನ ಕಸಕೊಂಡು, ನನ್ನ ಕೈಕಾಲುಗಳನ್ನು ಕಡಿತೀಯಾ? ಹೊಲದಲ್ಲಿ ಉತ್ತಿಬೆಳಿದೇ ನಾನು ಬದುಕ್ತೀನಾ? ಇವತ್ತು ನನ್ನ ಎತ್ತುಗಳ್ನ ಕಸಕಂಡು; ನಾಳೆ ನನ್ನ ಹೊಲ ಕಸಕಬೇಕಂತ ಮಾಡೀಯಾ? ಆ ನೆಲ ನನ್ನದು; ಅದೇ ನನ್ನ ಉಸಿರು. 

ನಾನು ಯಾವುದನ್ನ ಬಿಡೋದಿಲ್ಲ; ಮನೆಯಿಂದ ಹೊರಗೆ ಬಾ! ನಿನ್ನ ಕೈ ಕಾಲ್ಮುರಿದು, ಗುಂಡಿಗೆ ಬಗಿತೀನಿ' ಎಂದು ಅರಚುತ್ತಿದ್ದಾನೆ. ಆದ್ರೂ  ಮನೆಯಿಂದ  ಹೊರಗೆ ಬರದ ಶಾನುಭೋಗನನ್ನು, ಮತ್ತೊಮ್ಮೆ ಮುಂಬಾಗಿಲಿನಿಂದಲೇ ಶಾನುಭೋಗ್ರೇ? ಎಂದು ಭೂಮಿಯಾಕಾಶ ಒಂದಾಗುವಂತೆ ಕೂಗಿದನು. ಶಾನುಬೋಗನಿಗೆ ಅರ್ಥವಾಗಿ ಹೋಯಿತು. 

ಇವತ್ತು ರಂಗಯ್ಯ ನನ್ನನ್ನು ಬಿಡುವುದಿಲ್ಲ; ನಾನಿನ್ನು ಮನೆಯೊಳಗಿದ್ದು ಪ್ರಯೋಜನವಿಲ್ಲ, ರಂಗಯ್ಯನಿಗೆ ಶರಣಾಗುವುದೇ ಲೇಸು ಅನಿಸಿ ಹೊರಗೆ ಬಂದು ನಿಂತನು. ಎದುರಿಗೆ ಬಂದು ನಿಂತ ಶಾನಭೋಗನ ನೋಡಿದ ರಂಗಯ್ಯ ಮಾತಾಡದೆ, ಶಾನುಭೋಗನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ಹಲ್ಲುಗಳನ್ನು  ಮಸೆಯುತಿದ್ದಾನೆ. ಆಗ ಶಾನುಭೋಗ ರಂಗಯ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡದೆ 'ರಂಗಯ್ಯ ನೀನಿಷ್ಟು ಕಷ್ಟ ಪಡುತ್ತಿಯಾ ಅಂತ ಗೊತ್ತಿದ್ರೆ ನಾನು ಎತ್ತುಗಳನ್ನು ಹೊಡೆದುಕೊಂಡು ಬರುತ್ತಿದ್ದೆನಾ? ನಿಮ್ಮಪ್ಪ ಮಾಡಿದ ಸಾಲ! ನೀನು ತಿಳಿಸಿದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ಸಿಗುತ್ತದೆ. 

ಸರಿಬಿಡು! ಕೊಟ್ಟಷ್ಟೇ ಸಾಕು. ಕೊಡದವರನ್ನು ಪೀಡಿಸುತ್ತೇನಾ! ತೆಗೆದುಕೋ ನಿನ್ನ ಸಾಲದ ಕಾಗದಪತ್ರ. ಇವತ್ತಿಗೆ ನಿನ್ನ ಸಾಲ ತೀರಿದೆಂದು ತಿಳಿದುಕೋ. ನಿನ್ನ ಎತ್ತುಗಳನ್ನು ಹೊಡೆದುಕೊಂಡು ಹೋಗು' ಅಂದನು. ಶಾನುಭೋಗನು ಅಂದ ಆ ಒಂದು ಮಾತಿಗೆ ರಂಗಯ್ಯ ಕೈಯಲ್ಲಿದ್ದ ಕೋಲು ಬಿಸಾಕಿದನು.ಹಾವಿನಂತೆ ಬುಸುಗುಡುತ್ತಿದ್ದವನು ಹಸುಗೂಸಾಗಿ ಹೋದನು! ಕರಗಿ ನೀರಾಗಿ ಹೋದನು! ಗೋವಿನಂತಾದನು! ನಾಯಿಮರಿಯಂತಾದನು! ನೊಣದಂತಾದನು! ಸೊಳ್ಳೆಯಂತಾಗಿ ಶಾನಭೋಗನ ಮುಂದೆ ಅಡ್ಡಬಿದ್ದು ಕಣ್ಣೀರ ಧಾರೆ ಸುರಿಸುತ್ತಲೇ ಕೈ ಮುಗಿಯುತ್ತ 'ಅಯ್ಯಾ! ಧರ್ಮ ಪ್ರಭುಗಳಾದ ನೀವು ನನ್ನ ಎತ್ತುಗಳ್ನ ಮಾತ್ರ ಹಿಂದಕ್ಕೆ ಕೊಡಿ ಸಾಕು. 

ನಿಮ್ಮ ಸಾಲವನ್ನೂ ಪ್ರತಿವರ್ಷನೂ ತೀರಿಸುತ್ತ ಬರುತೀನಿ. ನನ್ನಯ್ಯನ ಸಾಲ ತೀರಿಸದೇ ಇರುತ್ತೇನಾ? ಒಂದು ವೇಳೆ ನಾನು ಸತ್ತರೆ, ಮುಂದೆ ನನ್ನ ಮಗ ಸಾಲ ತಿಳಿಸಬೇಕೆಂದು, ಅವನಿಂದ ಮಾತು ತೆಗೆದುಕಂಡು ಸಾಯ್ತೀನಿ. ನಮ್ಮಂಥ ಬಡವರ ಮೇಲೆ ಒಂದಿಷ್ಟು ಕನಿಕರ ಇಟ್ಟುಕೊಳ್ಳಪ್ಪ! ಸಾಕು ಎಂದು ಅಡ್ಡಬಿದ್ದು ಮುಗಿದು ತನ್ನ ಎತ್ತುಗಳನ್ನು ಹೊಡೆದುಕೊಂಡು ಹೋದನು. ಶಾನುಭೋಗನಿಗೆ ಆ ನೀರವದಲ್ಲಿ ರಂಗಯ್ಯ ಮತ್ತವನ ಎತ್ತುಗಳು ಹಾಕುತಿದ್ದ ಹೆಜ್ಜೆಗಳ ಸದ್ದು ಮಾತ್ರ ಕೇಳಿಸುತ್ತಿತ್ತು. ಆ ಹೆಜ್ಜೆಗಳ ಸದ್ದನ್ನು ಅದೆಷ್ಟೋ ಹೊತ್ತು ಆಲಿಸುತ್ತ ನಿಂತಿದ್ದ ಶಾನುಭೋಗನಿಗೆ, ಎತ್ತುಗಳ ಹೆಜ್ಜೆಗಳಷ್ಟೇ, ರಂಗಯ್ಯನ ಹೆಜ್ಜೆಗಳೂ ಬಿರುಸು ಅನಿಸತೊಡಗಿದವು. ಆ ಬಿರುಸು ಹೆಜ್ಜೆಗಳು ಮತ್ತೆ ಮತ್ತೆ ನೆನಪಾಗುತ್ತ ಶಾನುಭೋಗನ ಎದೆ ಬಡಿದುಕೊಳ್ಳತೊಡಗಿತು.

ಡಾ. ವಿರೂಪಾಕ್ಷಿ ಎನ್ ಬೋಸಯ್ಯ

ಬೊಸೇದೇವರಹಟ್ಟಿ, ಚಳ್ಳಕೆರೆ ತಾಲೂಕು.


 


No comments:

Post a Comment