Tuesday 29 June 2021

ನಾಯಕನಹಟ್ಟಿಗೆ ಹರಿಯಿತು ವಾಣಿವಿಲಾಸ ನೀರು.

*ಪಟ್ಟಣದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಾಣಿವಿಲಾಸ ಜಲಾಶಯದ ಶುದ್ಧ ಕುಡಿಯುವ ನೀರಿನ ಘಟಕವು ಆರಂಭವಾಗುತ್ತಿದ್ದು,

 Ø ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯಬೇಕು ಎಂಬ ಪಟ್ಟಣದ 10 ವಾರ್ಡ್‌ಗಳ ಸಾರ್ವಜನಿಕರ ಕನಸು ನನಸಾಗಲಿದೆ. 

 *ಪಟ್ಟಣಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಾರಿಕಣಿವೆಯ ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು.


ನಾಯಕನಹಟ್ಟಿ:  ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ ಅವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಲಿದ್ದು, ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯಬೇಕು ಎಂಬ ಪಟ್ಟಣದ 10 ವಾರ್ಡ್‌ಗಳ ಸಾರ್ವಜನಿಕರ ಕನಸು ನನಸಾಗಲಿದೆ.

ಪಟ್ಟಣಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಾರಿಕಣಿವೆಯ ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು. ಆ ನೀರನ್ನು ನೇರವಾಗಿ ಸಾರ್ವಜನಿಕರು ಬಳಸಲು ಯೋಗ್ಯವಿಲ್ಲದ ಕಾರಣ ಪಟ್ಟಣದಲ್ಲಿ ಅತ್ಯಾಧುನಿಕ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ₹ 2.3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ನಗರ ನೀರು ಸರಬರಾಜು ಘಟಕದ ಎಂಜಿನಿಯರ್ ಎಚ್.ಬಿ. ಓಬನಾಯಕ ಮಾತನಾಡಿ, 'ಪಟ್ಟಣದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರು ಶುದ್ಧೀಕರಣ ಘಟಕವು ದಿನಕ್ಕೆ 20 ಲಕ್ಷದ 10 ಸಾವಿರ ಲೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ವಾಣಿವಿಲಾಸ ಸಾಗರದ ಜಲಾಶಯದಿಂದ ದಿನವೊಂದಕ್ಕೆ 10 ಲಕ್ಷದ 81 ಸಾವಿರ ಲೀಟರ್‌ಗಳಷ್ಟು ನೀರು ಸರಬರಾಜು ಆಗುತ್ತಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ತುಂಗಭದ್ರಾ ಹಿನ್ನೀರಿನಿಂದಲೂ ಕುಡಿಯುವ ನೀರಿನ ಸರಬರಾಜು ಆಗಲಿದ್ದು, ಇದರ ನೀರನ್ನು ಶುದ್ಧೀಕರಣ ಮಾಡಲು ಸಹಕಾರಿಯಾಗಲಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10 ವಾರ್ಡ್‌ಗಳ ಪ್ರತಿಯೊಬ್ಬರಿಗೂ ದಿನವೊಂದಕ್ಕೆ ತಲಾ 135 ಲೀಟರ್‌ಗಳಷ್ಟು ನೀರು ನೀಡುವ ಗುರಿಯನ್ನು ಹೊಂದಲಾಗಿದೆ.
ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಆರಂಭದ 3 ತಿಂಗಳು ನೀರು ಸರಬರಾಜು ಮಾಡುವ ತರಬೇತಿಯನ್ನು ನೀಡಲಾಗುವುದು. ನಂತರ 2 ವರ್ಷಗಳವರೆಗೂ ದುರಸ್ತಿ ಮಾಡುವುದು ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ' ಎಂದು ಹೇಳಿದರು. ಪಟ್ಟಣದ ನಾಗರಿಕರು ಶುದ್ಧ ಕುಡಿಯುವ ನೀರನ್ನು ಬಳಸುವ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ವಿವಿಧ ಕಾರ್ಯಕ್ರಮಗಳ ಉದ್ಘಾಟನೆ.

  *'ಸಮಾಜ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಜೂನ್ 30ರಂದು ಬುಧವಾರ ರೇಖಲಗೆರೆ ಗ್ರಾಮದ 80 ಎಕರೆ ಕಾವಲು ಪ್ರದೇಶದಲ್ಲಿ ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

  *ನಂತರ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ₹ 9 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.  

*ಕ್ಷೇತ್ರದ ಮಹಿಳೆಯರು, ಹಾಗೂ ಕೌಶಲ ಹೊಂದಿರುವ ವ್ಯಕ್ತಿಗಳಿಗೆ ವ್ಯಾಪಾರ ವಹಿವಾಟುಗಳ ಘಟಕ ಸ್ಥಾಪಿಸಲು ವಿವಿಧ ಅಭಿವೃದ್ಧಿ ನಿಗಮಗಳಿಂದ 1 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ₹ 50 ಸಾವಿರ ನೇರ ಸಾಲದ ಚೆಕ್ ವಿತರಣೆ, 30ಕ್ಕೂ ಹೆಚ್ಚು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ತಲಾ ₹ 2.5 ಲಕ್ಷ ಧನಸಹಾಯ, ಕ್ಷೇತ್ರದ 100 ಸಣ್ಣರೈತರಿಗೆ ಗಂಗಾಕಲ್ಯಾಣ ಯೋಜನೆಯ ಮಂಜೂರಾತಿ ಪತ್ರ ನೀಡಲಿದ್ದಾರೆ. 

*ಅಂದು ಸಂಜೆ 4ಕ್ಕೆ ನಗರಾಭಿವೃದ್ಧಿ ಇಲಾಖೆ ಸಚಿವರಾದ ಬೈರತಿ ಬಸವರಾಜ ಅವರು ನೀರು ಶುದ್ಧೀಕರಣ ಘಟಕವನ್ನು ಉದ್ಘಾಟಿಸಲಿದ್ದಾರೆ' ಎಂದು ಸಚಿವರ ಆಪ್ತ ಕಾರ್ಯದರ್ಶಿ ಹನುಮಂತರಾಯಪ್ಪ ಮಾಹಿತಿ ನೀಡಿದರು.





No comments:

Post a Comment